ಪ್ರತಿನಿತ್ಯವೂ ಮೂಡಣದಲ್ಲಿ ಮೂಡುವ ಸೂರ್ಯ ಇಡೀ ಭೂಮಿಗೆ ಬೆಳಕು ನೀಡುವನು. ಸೂರ್ಯನ ಬಿಸಿಲು ಇಲ್ಲದೆ ಇದ್ದರೆ ಯಾವುದೇ ಚಟುವಟಿಕೆಗಳು ಕೂಡ ಆಗಲ್ಲ ಎನ್ನುವುದು ಶತಸಿದ್ಧ. ಸಣ್ಣ ಕ್ರಿಮಿಯಿಂದ ಹಿಡಿದು ಮನುಷ್ಯನ ತನಕ ಪ್ರತಿಯೊಂದು ಜೀವಕ್ಕೂ ಬಿಸಿಲಿನ ಅಗತ್ಯವಿದೆ. ಅದೇ ಸೂರ್ಯನ ಬಿಸಿಲಿನಲ್ಲಿ ವಿಟಮಿನ್ ಡಿ ಅಂಶವಿದ್ದು, ಅದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹೀಗಾಗಿ ಬಿಸಿಲಸ್ನಾನ ಮಾಡುವ ಜನರು ನಮಗೆ ಸಮುದ್ರ ತೀರದಲ್ಲಿ ಕಾಣಸಿಗುವರು.
ಆದರೆ ಇಂದಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಬಿಸಿಲು ಕೂಡ ಮಲಿನವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಮಾಲಿನ್ಯದಿಂದಾಗಿ ತೆಳುವಾಗುತ್ತಿರುವಂತಹ ಓಜೋನ್ ಪದರ. ಬಿಸಿಲನ್ನು ತಡೆಯುವಂತಹ ಓಜೋನ್ ಪದರವು ತೆಳುವಾಗುವ ಪರಿಣಾಮ ಬಿಸಿಲಿನ ಶಾಖವು ಹೆಚ್ಚಾಗುತ್ತಲಿದೆ. ಇದರ ಪರಿಣಾಮವಾಗಿ ಯುವಿ ಕಿರಣಗಳು ದೇಹಕ್ಕೆ ಹಾನಿ ಉಂಟು ಮಾಡುತ್ತಿದೆ. ಅರಣ್ಯ ನಾಶ, ಅತಿಯಾದ ಕೈಗಾರಿಕೆ ಇತ್ಯಾದಿಗಳು ಇದಕ್ಕೆ ಪ್ರಮುಖ ಕಾರಣ.
ಇಂತಹ ಯುವಿ ಕಿರಣಗಳನ್ನು ರಕ್ಷಿಸಿಕೊಳ್ಳಲು ಹೆಚ್ಚಿನವರು ಸನ್ ಸ್ಕ್ರಿನ್ ಬಳಸಿಕೊಳ್ಳುವರು. ಸನ್ ಸ್ಕ್ರೀನ್ ನ್ನು ಬಳಸದೆ ಹೊರಗಡೆ ಹೋದರೆ ಆಗ ದೇಹಕ್ಕೆ ಹಾನಿಕಾರಕ ಯುವಿ ಕಿರಣಗಳು ಪರಿಣಾಮ ಬೀರುವುದು ಎಂದು ಹೇಳಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಾಗುವಂತಹ ಸನ್ ಸ್ಕ್ರೀನ್ ಎಷ್ಟರಮಟ್ಟಿಗೆ ಒಳ್ಳೆಯದು ಮತ್ತು ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲವೇ ಎನ್ನುವ ಪ್ರಶ್ನೆ ಮೂಡುವುದು. ಆದರೆ ಸನ್ ಸ್ಕ್ರೀನ್ ನಿಂದ ಕೂಡ ತ್ವಚೆಗೆ ಹಾನಿ ಆಗುವುದು.
ಯಾಕೆಂದರೆ ಸನ್ ಸ್ಕ್ರೀನ್ ನ್ನು ತಯಾರಿಸಲು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಚರ್ಮಕ್ಕೆ ಹಾನಿ ಉಂಟು ಮಾಡುವುದು. ಸನ್ ಸ್ಕ್ರೀನ್ ನಲ್ಲಿ ಇರುವ ರಾಸಾಯನಿಕಗಳು ಯಾವತ್ತೂ ಚರ್ಮಕ್ಕೆ ಒಳ್ಳೆಯದಲ್ಲ. ಹೀಗಾಗಿ ಈ ಲೇಖನದಲ್ಲಿ ಸನ್ ಸ್ಕ್ರೀನ್ ನಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.